ರಾಜೀವ ತಾರಾನಾಥ
1932- `ಸರೋದ್ ವಾದನ ಮೂಲಕ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿರುವ ಕರ್ನಾಟಕದ ಸಂಗೀತ ಕಲಾವಿದ ಹಾಗೂ ಸಾಹಿತಿ. 1932ರ ಅಕ್ಟೋಬರ್ 17ರಂದು ಜನಿಸಿದರು. ಪ್ರಸಿದ್ಧ ವೈದ್ಯರೂ ಸಾಹಿತಿಯೂ ವಾಗ್ಮಿಯೂ ಸಂಗೀತಗಾರರೂ ಯೋಗಾಭ್ಯಾಸಿಯೂ ಕ್ರಾಂತಿಕಾರಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಪಂಡಿತ ತಾರಾನಾಥರು ಇವರ ತಂದೆ; ತಾಯಿ ಸುಮತಿ. ತುಂಗಭದ್ರಾ ನದಿಯ ದಂಡೆಯ ಮೇಲಿದ್ದ ಪ್ರೇಮಾಯತನ ಎಂಬ ಆಶ್ರಮದಲ್ಲಿ ರಾಜೀವರು ತಮ್ಮ ಬಾಲ್ಯದ ದಿವಸಗಳನ್ನು ಕಳೆದರು.

	ರಾಜೀವರಿಗೆ ಚಿಕ್ಕಂದಿನಿಂದಲೂ ಗೆಳೆಯ, ಗುರು, ಆಪ್ತರೆಂದರೆ ಇವರ ತಂದೆಯೆ. ಎರಡನೆಯ ಒಡನಾಗಿ ಮನೆಯಲ್ಲಿದ್ದ ಗ್ರಾಮಫೋನು. ಆಗಿನ ಕಾಲದ ಖ್ಯಾತ ಹಿಂದೂಸ್ತಾನಿ ಗಾಯಕರ ಧ್ವನಿಮುದ್ರಿಕೆಗಳು ಮನೆಯಲ್ಲಿದ್ದುದಲ್ಲದೆ ಮನೆಯೆ ಸಂಗೀತ ಶಾಲೆಯಂತಿತ್ತು. ಹೀಗಾಗಿ ತಮ್ಮ ಬಿಡುವಿನ ಅವಧಿಯಲ್ಲಿ ಅಬ್ದುಲ್ ಕರೀಂಖಾನರಿಂದ ಹಿಡಿದು ಅನೇಕ ಹಿಂದೂಸ್ತಾನಿ ಗಾಯಕರ ಧ್ವನಿಮುದ್ರಿಕೆಗಳನ್ನು ರಾಜೀವರು ಆಲಿಸುತ್ತಿದ್ದರು. ಮನೆಯಲ್ಲಿ ಕನ್ನಡ, ಸಂಸ್ಕøತ, ಇಂಗ್ಲಿಷ್, ಉರ್ದು, ಕೊಂಕಣಿ, ಹಿಂದೀ, ಬಂಗಾಲಿ, ತಮಿಳು, ತೆಲುಗು-ಹೀಗೆ ಹಲವು ಭಾಷೆಗಳನ್ನು ಮಾತನಾಡುತ್ತಿದ್ದ ಪರಿಸರವಿತ್ತು. ಇಂಥ ವೈವಿಧ್ಯಮಯವಾದ ಶ್ರೀಮಂತ ಸಾಂಸ್ಕøತಿಕ ಪರಿಸರದಲ್ಲಿ ರಾಜೀವರು ತಮ್ಮ ಬಾಲ್ಯವನ್ನು ಕಳೆದರು. ರಾಜೀವರನ್ನೂ ಚಿಕ್ಕವರಿರುವಾಗಲೇ ಪಂಡಿತ ತಾರಾನಾಥರು ಇವರಿಗೆ ಸಂಗೀತ ಪಾಠ ಕಲಿಸುವ ವ್ಯವಸ್ಥೆ ಮಾಡಿದ್ದರು. ಮೊದಲಿಗೆ ಸವಣೂರ ಕೃಷ್ಣಾಚಾರ್ಯರಿಂದ ಶಾಸ್ತ್ರೋಕ್ತ ಸಂಗೀತ ಕಲಿಕೆ ಪ್ರಾರಂಭವಾಯಿತು. ಅನಂತರದಲ್ಲಿ ಸವಾಯಿ ಗಂಧರ್ವರ ಶಿಷ್ಯರಾದ ವೆಂಕಟರಾವ್ ರಾಮದುರ್ಗರ ಮೂಲಕ ಭೈರವಿ ರಾಗವನ್ನು ಕಲಿತಿದ್ದಲ್ಲದೆ ಆ ಮೂಲಕ ರಾಗಗಳ ಸಂಕೀರ್ಣತೆಯ ಅರಿವುಂಟಾಯಿತು. 1940ರಲ್ಲಿ ಪಂಚಾಕ್ಷರಿ ಗವಾಯಿಗಳಿಂದ ಮುಲ್ತಾನಿ, ಬೋಗಿಯಾ ರಾಗಗಳನ್ನು ಕಲಿತರು. ಒಂಬತ್ತು ವರ್ಷದ ಬಾಲಕ ರಾಜೀವ ಬೆಂಗಳೂರಿನಲ್ಲಿ ಕಟ್ಟಡವೊಂದರ ಉದ್ಘಾಟನೆಗೆ ಸಂಗೀತ ಕಛೇರಿ ನಡೆಸಿಕೊಟ್ಟು ಜನಪ್ರೀತಿಗೆ ಪಾತ್ರರಾದರು. ಇದು ಇವರ ಮೊಟ್ಟಮೊದಲ ಸಂಗೀತ ಕಛೇರಿ. ಅಂದು ಇವರು ಹಾಡಿದ ರಾಗ ಬಾಗೆಶ್ರೀ.

	1942ರಲ್ಲಿ ಶಂಕರಜೋಶಿ ದೇವಗಿರಿ ಅವರಿಂದ ರಾಜೀವರಿಗೆ ಸಂಗೀತಪಾಠ ಹೇಳಿಸುವ ವ್ಯವಸ್ಥೆಯನ್ನು ಪಂಡಿತ ತಾರಾನಾಥರು ಮಾಡಿದ್ದರು. ದೇವಗಿರಿಯವರು ಪಾಠ ಹೇಳಲು ಬಂದ ದಿನದಂದು ಪಂಡಿತ ತಾರಾನಾಥರು ತೀರಿಕೊಂಡಿದ್ದರು. (31-10-42). ಧೃತಿಗೆಡದ ರಾಜೀವರ ತಾಯಿ ಮಗನಿಗೆ ಸಂಗೀತ ಪಾಠ ಹೇಳಿಸುವ ವ್ಯವಸ್ಥೆ ಮಾಡಿದರು. ಸುಮಾರು ಒಂಬತ್ತು ವರ್ಷಗಳ ಕಾಲ ರಾಜೀವರು ಶಂಕರಜೋಶಿಯವರಲ್ಲಿ ಸಂಗೀತವ್ಯಾಸಂಗ ಮಾಡಿದರು.

ರಾಜೀವರು 1949ರಲ್ಲಿ ನೇರವಾಗಿ ಸೀನಿಯರ್ ಕೇಂಬ್ರಿಜ್ ಪರೀಕ್ಷೆಗೆ ಕುಳಿತು ಉತ್ತಮಶ್ರೇಣಿಯಲ್ಲಿ ತೇರ್ಗಡೆಯಾದರು. 1955ರ ವೇಳೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಆನರ್ಸ್ ಪದವಿ ಪಡೆದು ಅದೇ ಕಾಲೇಜಿನಲ್ಲಿ ಅಧ್ಯಾಪಕರಾದರು. 1961ರರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಇಂಗ್ಲಿಷ್ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೇ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕವಾದರು. ಯು.ಜಿ.ಸಿ. ಶಿಷ್ಯವೇತನ ಪಡೆದು 1969ರಲ್ಲಿ ಸಿ.ಡಿ. ನರಸಿಂಹಯ್ಯನವರ ಮಾರ್ಗದರ್ಶನದಲ್ಲಿ ದಿ ಇಮೇಜ್ ಇನ್ ದಿ ಪೊಯಿಟ್ರಿ ಆಫ್ ಟಿ. ಎಸ್. ಎಲಿಯಟ್ ಎಂಬ ವಿಷಯ ಕುರಿತು ಅಧ್ಯಯನ ಮಾಡಿ ಪಿಎಚ್.ಡಿ. ಪದವಿ ಪಡೆದರು.

ರಾಜೀವರ ಬದುಕಿನಲ್ಲಿ ಮಹತ್ತ್ವದ ತಿರುವು ಮೂಡಿಸಿದ ಘಟನೆಯೆಂದರೆ 1952ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂಡಿತ ರವಿಶಂಕರ್ ಮತ್ತು ಉಸ್ತಾದ್ ಅಲಿ ಅಕ್ಬರ್‍ಖಾನರ ಸಿತಾರ್-ಸರೋದ್ ಜುಗಲ್‍ಬಂದಿ ಕಾರ್ಯಕ್ರಮ. ಅದುವರೆಗೆ ರಾಜೀವರಿಗೆ ಸರೋದ್ ವಾದ್ಯದ ಮಹತ್ತ್ವ ತಿಳಿದಿರಲಿಲ್ಲ; ಅಲ್ಲದೆ ಸರೋದ್ ವಾದ್ಯವನ್ನೂ ವಾದನವನ್ನೂ ಅಸಡ್ಡೆಯಿಂದಲೇ ನೋಡಿದವರು. ವಾದ್ಯಗಳ ರಾಜನೆಂದರೆ `ಸಿತಾರ್ ಎಂದುಕೊಂಡಿದ್ದ ರಾಜೀವರು ಪಂಡಿತ ರವಿಶಂಕರ್ ಅವರ ಸಿತಾರ್ ಕೇಳಲು ಅಂದಿನ ಸಂಗೀತ ಕಛೇರಿಗೆ ಬಂದು ಅಲಿ ಅಕ್ಬರ ಖಾನರು ನುಡಿಸಿದ `ಪೂರ್ಯಾಕಲ್ಯಾಣಿ ರಾಗವನ್ನು ಕೇಳಿದರು. ರಾಜೀವರ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಆ ರಾಗ ಮುಗಿಯುವ ವೇಳೆಗೆ ರಾಜೀವರು ಸರೋದ್ ವಾದನದ ವಶವಾಗಿಹೋಗಿದ್ದರು. ಸರೋದ್‍ವಾದನ ರಾಜೀವರ ಭಾವಕೋಶದಲ್ಲಿ ಹೆಪ್ಪುಗಟ್ಟತೊಡಗಿತು. ಈ ವಾದ್ಯವನ್ನು ಕಲಿಯಲೇಬೇಕು, ಕಲಿತರೆ ಆಲಿ ಅಕ್ಬರ್‍ಖಾನರ ಹತ್ತಿರವೇ ಕಲಿಯಬೇಕೆಂದುಕೊಂಡರು. ಹೀಗೆ ಖಾನ್ ಸಾಹೇಬರ ಅಂದಿನ ಸಂಗೀತ ಕಛೇರಿ ರಾಜೀವರ ಸಂಗೀತ ಜೀವನಕ್ಕೆ ಒಂದು ಗೊತ್ತುಗುರಿಯನ್ನು ಕಲ್ಪಿಸಿಕೊಟ್ಟಿತು.

ಸರೋದ್ ಕಲಿಯಲು ಅಲಿ ಅಕ್ಬರ್‍ಖಾನ್ ಅವರಲ್ಲಿ ಶಿಷ್ಯವೃತ್ತಿಕೈಗೊಂಡರು. 1952-55 ರವರೆಗೆ ಮುಂಬಯಿ ಬೆಂಗಳೂರುಗಳಿಗೆ ಓಡಾಟವಿಟ್ಟುಕೊಂಡೆ ಸರೋದ್ ಅಭ್ಯಾಸ ಹಾಗೂ ಅಧ್ಯಾಪನ ಎರಡನ್ನೂ ನಡೆಸಿಕೊಂಡು ಬಂದರು. ಇವರ ತಾಯಿ ತೀರಿಕೊಂಡ ಮೇಲೆ 1955ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ ಸಲ್ಲಿಸಿ ಮುಂಬಯಿಗೆ ಹೋಗಿ ನೆಲಸಿ ಜೀವನ ನಿರ್ವಹಣೆಗಾಗಿ `ಆರ್ಯನ್ ಪಾತ್ ಪತ್ರಿಕಾಲಯ ಮತ್ತು ಭಾರತೀಯ ವಿದ್ಯಾಭವನ ಶಾಲೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಸರೋದ್ ಅಭ್ಯಾಸವನ್ನು ಮುಂದುವರಿಸಿದರು.

ಕಲ್ಕತ್ತಕ್ಕೆ ಹೋಗಿ ನೆಲಸಿದ್ದ ಅಲಿ ಅಕ್ಬರ್ ಖಾನರು ತಮ್ಮ ಶಿಷ್ಯನನ್ನು ಕಲ್ಕತ್ತಕ್ಕೆ ಬರುವಂತೆ ಕರೆದರು. ರಾಜೀವರು ಕಲ್ಕತ್ತಕ್ಕೆ ಹೋದರು. ಕಡುಕಷ್ಟದ ದಿನಗಳವು. ರಾಜೀವರು ತಾಳ್ಮೆ-ಸಂಯಮಗಳಿಂದ ಕಷ್ಟ ನಿಷ್ಠುರಗಳನ್ನು ಧೈರ್ಯದಿಂದ ಎದುರಿಸಿದರು. ಇವರ ಧ್ಯಾನಶೀಲ ಮನಸ್ಸು ಇವರನ್ನು ಮಹಾನ್‍ಸಾಧಕರನ್ನಾಗಿ ಮಾಡಿತು. 1955ರಿಂದ 1960ರವರೆಗೆ ಖಾನ್ ಸಾಹೇಬರು ಸರೋದ್ ನುಡಿಸುವಿಕೆಯನ್ನು ರಾಜೀವರಿಗೆ ಧಾರೆಎರೆದರು. ಇವರ ಸರೋದ್ ವಾದನಾಭ್ಯಾಸ ಒಂದು ಪರಿಪಕ್ವತೆಯ ಘಟ್ಟ ತಲುಪಿತು. ಅನಂತರ ರಾಜೀವರು ಕಲ್ಕತ್ತದಿಂದ ಹಿಂದಿರುಗಿ ಬಂದು ಪುನಃ ಅಧ್ಯಾಪನವೃತ್ತಿಯನ್ನು ಕೈಗೊಂಡರು. 1960ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜು, 1961ರಲ್ಲಿ ರಾಯಚೂರಿನ ಎಲ್.ವಿ.ಡಿ. ಕಾಲೇಜು, 1964ರಲ್ಲಿ ಧಾರವಾಡದ ಕರ್ನಾಟಕ ಕಾಲೇಜು, 1965ರಲ್ಲಿ ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಷನ್ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ದುಡಿದರು. 1968ರಲ್ಲಿ ತಿರುಚಿಯ ರೀಜನಲ್ ಕಾಲೇಜ್ ಆಫ್ ಎಂಜನಿಯರಿಂಗ್‍ನಲ್ಲಿ ಇಂಗ್ಲಿಷ್ ಬೋಧಕರಾಗಿದ್ದ ರಾಜೀವರು ಪಿಎಚ್.ಡಿ. ಪದವಿ ಪಡೆದ (1968) ಮೇಲೆ ಹೈದರಾಬಾದಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜ್ (ಸಿ.ಐ.ಇ.ಎಫ್.ಎಲ್.) ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕವಾದರು. 1986ರ ಅನಂತರ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಬೆಂಗಳೂರಿಗೆ ಬಂದು ನೆಲೆಸಿದರು. ಈಗ ತಮ್ಮ ಬದುಕಿನ ಸಂಪೂರ್ಣ ಸಮಯವನ್ನು ಸರೋದ್‍ಗಾಗಿ ಮೀಸಲಾಗಿಟ್ಟಿರುವ ರಾಜೀವರು ಪುಣೆಯ ಫಿಲಂ ಇನ್‍ಸ್ಟಿಟ್ಯೂಟ್‍ನಲ್ಲಿ ಸಂಗೀತ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ಸಂದರ್ಶನ ಪ್ರಾಧ್ಯಾಪಕರಾಗಿ ಮುಂದುವರೆದಿದ್ದಾರೆ.

ರಾಜೀವರ ಪತ್ನಿ ಮಾಧವಿ. ಇವರ ಏಕೈಕ ಪುತ್ರ ಚೇತನ್ ತಾರಾನಾಥ್ ಈಗ ಅಮೆರಿಕದಲ್ಲಿದ್ದಾರೆ, ಬದುಕಿನಲ್ಲಿ ಹಲವಾರು ಏರಿಳಿತಗಳನ್ನು ಕಂಡಿರುವ ರಾಜೀವರು ಸಂಚಾರಿ ಸ್ವಭಾವದ ವ್ಯಕ್ತಿ. ಹೊಸದರ ಅನ್ವೇಷಕರು. ಸ್ವತಂತ್ರ ಮನೋಧರ್ಮ ಇವರದು. ನಿರಂತರ ಶೋಧ ಇವರ ಗುಣ. ಏಕಾಗ್ರತೆ ಮತ್ತು ಚದರಿಕೊಳ್ಳುವುದು ಇವರ ಬದುಕಿನ ಮೂಲಭಿತ್ತಿ. ರಾಜೀವ್ ಸರೋದ್ ವಾದನದಲ್ಲಿ ಅಪಾರ ಸಿದ್ಧಿಗಳಿಸಿದ್ದಾರೆ. ಹಿಂದೂಸ್ತಾನಿ ಸಂಗೀತದಲ್ಲಿ ಸರೋದ್‍ವಾದಕರೇ ಇಲ್ಲ ಎನ್ನುವಷ್ಟರಮಟ್ಟಿಗೆ ಅವರ ಸಂಖ್ಯೆ ಇಳಿದಿರುವಾಗ ಇವರು ದೊಡ್ಡ ಸರೋದ್ ಕಲಾವಿದರಾಗಿ ಸೆನಾಯಿ ಘರಾನಾ ಸಂಗೀತ ಪರಂಪರೆಗೆ ಸೇರಿದ್ದಾರೆ. ಇವರು ದೇಶದಾದ್ಯಂತ ಕಛೇರಿಗಳನ್ನು ನಡೆಸಿರುವುದಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕಲ್ಕತ್ತದ ಅಖಿಲಭಾರತ ಸಂಗೀತೋತ್ಸವ. ಮುಂಬಯಿಯ ಭಾರತಖಂಡ ಸಮ್ಮೇಳನ, ಗ್ವಾಲಿಯರಿನ ತಾನಸೇನ ಸಮಾವೇಶ, ಬೆಂಗಳೂರಿನಲ್ಲಿ ಜರುಗಿದ (1986) ಅಖಿಲಭಾರತ ಸಾಂಸ್ಕøತಿಕ ಸಮ್ಮೇಳನ, ದೆಹಲಿಯಲ್ಲಿ ಜರುಗಿದ (1978) ರಾಷ್ಟ್ರೀಯ ಕಲಾ ಉತ್ಸವ ಮುಂತಾದವು. 1974ರಲ್ಲಿ ಇವರು ಆಸ್ಟ್ರೇಲಿಯ ದೇಶದಲ್ಲಿ ಪ್ರವಾಸಮಾಡಿ ಸಿಡ್ನಿ, ಮೆಲ್ಬೋರ್ನ್, ಅಡಿಲೆಡ್, ಕ್ಯಾನ್‍ಬೆರಾಗಳಲ್ಲಿ ಕಛೇರಿ ನಡೆಸಿದ್ದಾರೆ. ಸಿಡ್ನಿಯ ``ಅಪೇರಾ ಹೌಸ್‍ನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿರುವ (1974) ಪ್ರಪ್ರಥಮ ಭಾರತೀಯನೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಇರುವ ಅಲಿ ಅಕ್ಬರ್‍ಖಾನ್ ಸಂಗೀತ ಶಾಲೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಈಗಲೂ ದುಡಿಯುತ್ತಿದ್ದಾರೆ. ವಾಲ್‍ಡಿಸ್ನಿ ಯೂನಿವರ್ಸಿಟಿ ಆಫ್ ಪರ್‍ಫಾರ್ಮಿಂಗ್ ಆಟ್ರ್ಸ್ ಎಂಬಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ. ಇಲ್ಲಿ ಪ್ರಾಧ್ಯಾಪಕರಾಗಿರುವ ಭಾರತೀಯರಲ್ಲಿ ಪಂಡಿತ ರವಿಶಂಕರ್ ಮೊದಲಿಗರಾದರೆ ರಾಜೀವತಾರಾನಾಥರು ಎರಡನೆಯವರು.

ರಾಜೀವರದು ವೈವಿಧ್ಯಮಯವಾದ ಆಸಕ್ತಿ, ಬಹುಮುಖ ಪ್ರತಿಭೆ. ಇವರು ವಿಚಾರವಾದಿಗಳೂ ವಿಮರ್ಶಕರೂ ಹಿನ್ನೆಲೆ ಗಾಯಕರೂ ಸಂಗೀತ ನಿರ್ದೇಶಕರೂ ಆಗಿದ್ದಾರೆ. ಇವರು ಸಿನಿಮಾ ಜಗತ್ತಿಗೆ ನೀಡಿರುವ ಕೊಡುಗೆ ಕೂಡ ಗಮನಾರ್ಹವಾದುದು. ಎಂಬತ್ತರ ದಶಕದಲ್ಲಿ ಆರಂಭವಾದ ಹೊಸ ಅಲೆಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ. ಮೊದಮೊದಲಿಗೆ ತಮ್ಮ ಗುರುಗಳ ಜೊತೆಗೂಡಿ ಬಂಗಾಲಿ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡುತ್ತಿದ್ದ ರಾಜೀವರು 1970ರಲ್ಲಿ ಯು.ಆರ್.ಅನಂತಮೂರ್ತಿಯವರ ಕಾದಂಬರಿಯಾಧಾರಿತ `ಸಂಸ್ಕಾರ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದರು. 1975ರಲ್ಲಿ ಪಿ. ಲಂಕೇಶ್‍ರ ``ಪಲ್ಲವಿ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದರು. ಈ ಚಿತ್ರ ವರ್ಷದ ಅತ್ಯುತ್ತಮ ಹಿನ್ನಲೆ ಸಂಗೀತವುಳ್ಳ ಚಿತ್ರ ಎಂದು ರಾಷ್ಟ್ರಪ್ರಶಸ್ತಿ ಪಡೆಯಿತು. ಇವರ ಸಂಗೀತ ನಿರ್ದೇಶನದ ಕಾಂಚನ ಸೀತ (1878), ಪೂಕುವಯಲ್ (1981) ಎಂಬ ಮಲಯಾಳಂ ಚಿತ್ರಗಳು ರಾಷ್ಟ್ರ ಪ್ರಶಸ್ತಿ ಗಳಿಸಿವೆ. 1982ರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾದ `ಪೇಪರ್ ಬೋಟ್ ಎಂಬ ಚಲನಚಿತ್ರ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದೆ. 1991ರಲ್ಲಿ ಬಿಡುಗಡೆಯಾದ `ಕದವು ಎಂಬ ಮಲಯಾಳಂ ಚಲನಚಿತ್ರ ಸಿಂಗಪೂರಿನಲ್ಲಿ ನಡೆದ ಏಷ್ಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವೆಂದು ಮನ್ನಣೆ ಗಳಿಸಿದೆ. ಇದಲ್ಲದೆ 1970ರಲ್ಲಿ ಚದುರಂಗರು ನಿರ್ದೇಶಿಸಿದ ಕುವೆಂಪು ಸಾಕ್ಷ್ಯಚಿತ್ರಕ್ಕೂ ರಾಜೀವರು ಸಂಗೀತ ನಿರ್ದೇಶನ ನೀಡಿದ್ದಾರೆ.

ರಾಜೀವರಿಗೆ ಸಂಗೀತದ ತರುವಾಯದ ಆಸಕ್ತಿಯ ಕ್ಷೇತ್ರವೆಂದರೆ ಸಾಹಿತ್ಯ. ಸಾಹಿತ್ಯವನ್ನು ಸಂಗೀತದ ಸಂವೇದನೆಯಿಂದಲೇ ಗ್ರಹಿಸುವ ಮನಸ್ಸು ಇವರದು. ಯು. ಆರ್. ಅನಂತಮೂರ್ತಿಯವರ ಮೂಲಕ ಕನ್ನಡ ಸಾಹಿತ್ಯ ಪ್ರೀತಿಯನ್ನು ಗಳಿಸಿಕೊಂಡು ನವ್ಯ ತಲೆಮಾರಿನ ಅನೇಕ ಲೇಖಕರ ಕೃತಿಗಳನ್ನು ಮನನ ಮಾಡಿಕೊಂಡಿದ್ದಾರೆ. ಕನ್ನಡ ನವ್ಯವಿಮರ್ಶಕರಲ್ಲಿಯೂ ಇವರ ಹೆಸರು ಮುಖ್ಯವಾದದ್ದು. ಟಿ. ಎಸ್. ಎಲಿಯಟ್‍ನ ಕಾವ್ಯದ ಮೇಲೆ ಸಂಶೋಧನೆ ನಡೆಸಿ ಆ ಕಾವ್ಯದ ಸೂಕ್ಷ್ಮಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಷೇಕ್‍ಸ್ಪಿಯರನ ಕಾರಿಯೊಲನಸ್ ನಾಟಕವನ್ನೂ ಎಲಿಯಟ್‍ನ ದಿ ವೇಸ್ಟ್ ಲ್ಯಾಂಡ್ ಕಾವ್ಯವನ್ನೂ ತೌಲನಿಕವಾಗಿ ಅಧ್ಯಯನ ನಡೆಸಿ ಮಂಡಿಸಿರುವ ಪ್ರಬಂಧ ಪ್ರಪಂಚದ ವಿಮರ್ಶಕರ ಗಮನ ಸೆಳೆದಿದೆ.
ಕನ್ನಡದಲ್ಲಿ ರಾಜೀವರು ಬರೆದಿರುವ ಲೇಖನಗಳು ಕಡಿಮೆ. ಎಚ್. ಎಂ. ಚನ್ನಯ್ಯನವರ ಕಾಮಿ, ಆಮೆ ಕವನ ಸಂಕಲನಗಳಿಗೆ, ನ. ರತ್ನ ಅವರ ಎಲ್ಲಿಗೆ ಎಂಬ ನಾಟಕಕ್ಕೆ, ಯು. ಆರ್. ಅನಂತಮೂರ್ತಿಯವರ ಪ್ರಶ್ನೆ ಕಥಾಸಂಕಲನಕ್ಕೆ ಇವರು ಅರ್ಥಪೂರ್ಣವಾದ ಮುನ್ನುಡಿಗಳನ್ನು ಬರೆದಿದ್ದಾರೆ. ಗಿರೀಶ್ ಕಾರ್ನಾಡರ ತುಘಲಕ್ ನಾಟಕದ ಬಗ್ಗೆ, ಚಂದ್ರಶೇಖರ ಕಂಬಾರರ ನಾಟಕಗಳ ಬಗ್ಗೆ ಇವರು ವಿಮರ್ಶೆ ಬರೆದಿದ್ದಾರೆ. ಮನ್ವಂತರದಲ್ಲಿ ಬರೆದ `ನಾಟಕ ಪ್ರಜ್ಞೆ, `ನಾಟಕ ಮತ್ತು ಕ್ರಿಯಾವಿಧಿ, `ಸಾಹಿತ್ಯ ಮತ್ತು ವೈಚಾರಿಕತೆ, ``ಕದಡಿದ ನೀರು ಕೃತಿ ವಿಮರ್ಶೆ - ಈ ಲೇಖನಗಳು ಇವರನ್ನು ಕನ್ನಡ ನವ್ಯ ವಿಮರ್ಶಕರ ಸಾಲಿನಲ್ಲಿ ಮುಖ್ಯರನ್ನಾಗಿಸಿವೆ. ರಾಜೀವರು ಸಾಹಿತ್ಯ ಮತ್ತು ಸಂಗೀತ ಕುರಿತಂತೆ ಪ್ರಕಟಿಸಿರುವ ಕೆಲವು ಲೇಖನಗಳು ಹೀಗಿವೆ:
ದಿ ಪೊಯಟ್ರಿ ಆಫ್ ನಿಜಮ್ ಎಜಿಕಿಲ್ (1966), ಆವರೇಜ್ ಹ್ಯಾಸ್ ದಿ ಪಾಸಿಟಿವ್: ಎ ನೋಟ್ ಆನ್ ಆರ್. ಕೆ. ನಾರಾಯಣ್ (1967), ಕಾರಿಯೊಲನಸ್, ದಿ ವೇಸ್ಟ್ ಲ್ಯಾಂಡ್ ಅಂಡ್ ದಿ ಕ್ಯಾರಿಯೊಲು ಪೊಯಮ್ಸ್ (1963). ಎಕ್ಸ್‍ಪೀರಿಯನ್ಸ್ ಅಂಡ್, ಕಾನ್ಸಪ್ಚ್ಯುಯಲೈಸೇಶನ್ : ಎ ಪ್ರಾಬ್ಲಮ್ ಫಾರ್ ದಿ ಕನ್ನಡ ಕ್ರಿಟಿಕ್ (1968), ನಳಿನಿ : ಎ ಸ್ಟಡಿ ಇನ್ ಏಲಿನೇಶನ್ (1971). ಎ ಸಾವಂತ್ ಇನ್ ಸರೋದ್ (1983), ಸಾಂಗ್ ಇನ್ ದಿ ಇಂಡಿಯನ್ ಫಿಲಂ (1983), ಸಮ್ ಲೌಡ್ ಥಿಂಕಿಂಗ್ ಆನ್ ದಿ ಟೀಚಿಂಗ್ ಆಫ್ ಮ್ಯೂಸಿಕ್ ಇನ್ ಇಂಡಿಯ (1985).

ರಾಜೀವರ ಸಾಧನೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. 1980ರಲ್ಲಿ ಏಡನ್ ಟೆಲಿವಿಷನ್ ಸಂಸ್ಥೆ ರಾಜೀವ ತಾರಾನಾಥರನ್ನು ಕುರಿತು `ಫಿನಾನ್‍ಮಿನ್ ಆಲ್ ಹಿಂದ್ (ಭಾರತದ ಕಲಾವಿದ) ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. 1983ರಲ್ಲಿ ಕರ್ನಾಟಕ ಸರ್ಕಾರ `ಕರ್ನಾಟಕದ ಸಂಗೀತಗಾರ ಎಂಬ ಹೆಸರಿನಲ್ಲಿ ಇವರ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದೆ. 1988ರಲ್ಲಿ ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿಯಿಂದ ಅಭಿನಂದನೆಯ ಮನ್ನಣೆ ದೊರೆತಿದೆ. 1989-92ರ ಅವಧಿಗೆ ಇವರಿಗೆ ಅಮೆರಿಕದ ಫೋರ್ಡ್ ಫೌಂಡೇಶನ್ ಫೆಲೋಶಿಪ್ ದೊರೆತಿದೆ. ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ (1992), ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995). ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1996)- ಇವರಿಗೆ ಲಭ್ಯವಾಗಿವೆ. ಈ ಪ್ರತಿಭಾ ಶಾಲಿಗೆ ಕರ್ನಾಟಕ ಸರಕಾರ ರಾಷ್ಟ್ರಮಟ್ಟದಲ್ಲಿ ನೀಡುವ ದಿ. ಟಿ.ಚೌಡಯ್ಯ ಪ್ರಶಸ್ತಿ (1997) ನೀಡಿ ಗೌರವಿಸಿದೆ.  													  
(ಎಚ್.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ